ಮಾಂಜರಾ -
ಕರ್ನಾಟಕದ ರಾಜ್ಯದ ಬಿದರ ಜಿಲ್ಲೆಯ ಮುಖ್ಯ ನದಿ. ಗೋದಾವರಿ ವ್ಯವಸ್ಥೆಗೆ ಸೇರಿದ ಈ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಬಿದರೆ ಜಿಲ್ಲೆಯ ಪಶ್ಚಿಮದಲ್ಲಿ ಸ್ವಲ್ಪದೂರ ಗಡಿಯಾಗಿ ಹರಿದು ಭಾಲ್ಕಿ ತಾಲ್ಲೂಕಿನ ಜಮಖಂಡಿ ಗ್ರಾಮದ ಉತ್ತರದಲ್ಲಿ ಜಿಲೆಯನ್ನು ಪ್ರವೇಶಿಸುತ್ತದೆ. ಸ್ವಲ್ಪ ದೂರಪೂರ್ವಕ್ಕೆ ಹರಿದು ಸಂಗಮದ ಬಳಿ ಕಾರಂಜಾ ನದಿಯನ್ನು ಕೂಡಿಸಿಕೊಂಡು ಅಲ್ಲಿಂದ ಉತ್ತರಾಭಿಮುಖದಾಗಿ ಹರಿಯುತ್ತದೆ. ಅನಂತರ ಮುಂದೆ ಸ್ವಲ್ಪದೂರ ಮಹಾರಾಷ್ಟ್ರ ಮತ್ತು ಬಿದರ ಜಿಲ್ಲೆಯ ಗಡಿಯಾಗಿ ಹರಿದು ಔರಾದ ತಾಲ್ಲೂಕಿನ ಹೊರಂಡಿ ಗ್ರಾಮದ ಬಳಿ ಮತ್ತೆ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಅಲ್ಲಿಂದ ಮುಂದೆ ಪೂರ್ವಾಭಿಮುಖವಾಗಿ ಹರಿದು ಔರಾದ ತಾಲ್ಲೂಕನ್ನು ಭಾಲ್ಕಿ ಮತ್ತು ಬಿದರ್ ತಾಲ್ಲೂಕುಗಳಿಂದ ಬೇರ್ಪಡಿಸುವುದು, ಬಿದರ ತಾಲ್ಲೂಕಿನ ನಾಮತಾ ಬಾದ್‍ನಿಂದ ಮುಂದೆ ಬಿದರ ಮತ್ತು ಆಂಧ್ರಪ್ರದೇಶದ ಗಡಿಯಾಗಿ ಸ್ವಲ್ಪದೂರ ಬಿಡುತ್ತದೆ. ಮಾಂಜರಾ ನದಿ ಬಿದರೆ ಜಿಲ್ಲೆಯಲ್ಲಿ ಸು. 97 ಕಿಮೀ ದೂರ ಹರಿದು ಸುಮಾರು 1,295 ಚಕಿಮೀ ಪ್ರದೇಶಕ್ಕೆ ನೀರಿನಾಶ್ರಯ ನೀಡಿದೆ. ನದಿಯ ಎರಡೂ ದಂಡೆ ಉದ್ದಕ್ಕೂ ಫಲವತ್ತಾಗಿದ್ದು ವ್ಯವಸಾಯಕ್ಕೆ ಅನುಕೂಲವಾಗಿದೆ. ಈ ನದಿಯ ಉದ್ದಕ್ಕೂ ಅಲ್ಲಲ್ಲಿ ಸಣ್ಣ ಹರಿಗೋಲುಗಳ ಉಪಯೋಗವಿದ್ದು ಅಕ್ಕಪಕ್ಕದ ಗ್ರಾಮಗಳ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗಿದೆ. ಈ ನದಿಯ ಉಪನದಿ ಕಾರಂಜಾ ಹೊಳಗೆ ರೂ 18 ಕೋಟಿ ವೆಚ್ಚದ ಕಟ್ಟೆಯನ್ನು ಕಟ್ಟುವ ಯೋಜನೆ ಇದ್ದು ಇದು 42,000 ಹೆಕ್ಟೇರ್ ಜಮೀನಿಗೆ ನೀರೊದಗಿಸುವ ಭರವಸೆಯಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ